ಚ್ಯಾಫಿಂಚ್ ಹಕ್ಕಿ

ಫ್ರಿಂಜಿಲಿಡೀ ಕುಟುಂಬಕ್ಕೆ ಸೇರಿದ ಒಂದು ಕಾಡು ಹಕ್ಕಿ. ಫಿಂಚ್ ಹಕ್ಕಿಗಳಿಗೆ ಬಹಳ ಹತ್ತಿರದ ಸಂಬಂಧಿ. ಯೂರೋಪ್, ಪಶ್ಚಿಮ ಏಷ್ಯ ಹಾಗೂ ಉತ್ತರ ಆಫ್ರಿಕಗಳಲ್ಲಿ ಕಾಣಬರುತ್ತದೆ. ಯೂರೋಪಿನ ಹಾಡು ಹಕ್ಕಿಗಳಲ್ಲಿ ಮುಖ್ಯವಾದ್ದೆನಿಸಿದೆ. ಇದರ ಶಾಸ್ತ್ರೀಯ ಹೆಸರು ಫ್ರಿಂಜಿಲ ಸೀಲೆಬ್ಸ್. ಗುಬ್ಬಚ್ಚಿ ಗಾತ್ರದ ಪುಟ್ಟ ಹಕ್ಕಿಯಿದು. ಗಂಡುಹಕ್ಕಿ ವರ್ಣಮಯವಾಗಿದೆ; ಇದರ ತಲೆಯ ಬಣ್ಣ ಬೂದೂ ಮಿಶ್ರಿತ ನೀಲಿ. ಕತ್ತು ಕೆಂಪು ಬಣ್ಣದ್ದು, ಎದೆ ನಸುಗೆಂಪು. ಪಾಶ್ರ್ವಗಳು ಕಂಗಂದು, ಬಾಲದ ಬುಡ ಹಳದಿ ಮಿಶ್ರಿತ ಹಸಿರು, ರೆಕ್ಕೆಗಳ ಮೇಲೆ ಹಾಗೂ ಬಾಲದ ಹೊರಪುಕ್ಕಗಳ ಮೇಲೆ ಬಿಳಿ ಬಣ್ಣದ ಪಟ್ಟೆಗಳಿವೆ. ಹೆಣ್ಣು ಮಾಸಲು ಆಲಿವ್ ಕಂದುಬಣ್ಣದ್ದು. ಚ್ಯಾಪಿಂಚ್ ಸರ್ವಭಕ್ಷಕ ಕೀಟ ಹಾಗೂ ಅವುಗಳ ಡಿಂಬಗಳನ್ನೂ ಕಾಳುಗಳನ್ನು ತಿಂದು ಸೇವಿಸುತ್ತದೆ. ಮರಗಳಲ್ಲೊ ಪೊದೆಗಳಲ್ಲೊ ಕಡ್ಡಿ, ಹುಲ್ಲು, ಗರಿ, ಹಾವಸೆ ಉಣ್ಣೆಯ ಎಳೆಗಳು- ಮುಂತಾದವನ್ನು ಬಳಸಿಕೊಂಡು ಗೂಡು ಕಟ್ಟಿ ಒಂದು ಸಲಕ್ಕೆ 4-5 ಮೊಟ್ಟೆಗಳನ್ನಿಡುತ್ತದೆ. 

ಚ್ಯಾಫಿಂಚ್ ಹಕ್ಕಿ ತನ್ನ ಉಲ್ಲಾಸಮಯ ಹಾಡುವಿಕೆಗೆ ಹೆಸರಾಗಿರುವುದರಿಂದ ಯೂರೋಪಿನಲ್ಲಿ ಇದನ್ನು ಪಂಜರದಲ್ಲಿಟ್ಟು ಸಾಕುವುದುಂಟು.
(ವಿ.ಕೆ.ವಿ.)
(ಪರಿಷ್ಕರಣೆ : ಕೆ ಎಸ್ ನವೀನ್)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ